ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗಿತ್ತಂತೆ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' !

ವಿನಯ್ ಭಾರದ್ವಾಜ್


ಮತ್ತೊಂದು ಚಿತ್ರ ದುಖಾಂತ್ಯವಾಗುತ್ತಿದೆಯಲ್ಲಾ ಅಂತ ಕಣ್ಣೀರೊರೆಸಿಕೊಂಡು, ‘ಅನ್ಯಾಯವಾಗಿ ದುರಂತ ನಾಯಕನಾಗಿ ಬಿಟ್ಟನಲ್ಲಾ…’ ಎಂದುಕೊಂಡು ಸೀಟಿಂದ ಎದ್ದರೆ, ‘ಪಿಚ್ಚರ್ ಅಭೀ ಬಾಕಿ ಹೈ ಮೇರೆ ದೋಸ್ತ್…’ ಎಂದು ಪುನಃ ಸೀಟಿಗೆ ಎಳೆದುಕೊಳ್ಳುವ, ಒಂದು ಚಿತ್ರಕ್ಕೆ ಇಂತಹ ಉಪಾಂತ್ಯವೂ ಕೊಡಬಹುದೆಂಬ ಊಹೆಗೂ ನಿಲುಕದ ಅನಿರೀಕ್ಷಿತೆಯಲ್ಲಿ ಕಳೆದು ಹೋಗುವ ಒಳಗೆ, ಕಥೆ ಸುಖಾಂತವಾಗುತ್ತದೆ. ‘ಅದ್ಭುತವೇನಲ್ಲ…ಅದರೂ ಸಿಂಪಲ್ಆಗ್ ಒಂದ್ ಲವ್ ಸ್ಟೋರಿ…’ ಎಂದು ಚಿತ್ರದ ಮೊದಲಿಗೆ ನಿವೇದನೆ ಇದ್ದರೂ, ಚಿತ್ರದ ಕೊನೆಗೆ ಅದ್ಬುತ ಎನ್ನುವ ಒಂದು ಗಟ್ಟಿ ಫೀಲ್ ಉಳಿಸಿ ಬಿಡುತ್ತದೆ. ಆ ಮಟ್ಟಿಗೆ ಸ್ಟೋರಿ ಸಿಂಪಲ್ ಎನಿಸಿದರೂ ಸಹ, ‘ಸಿಂಪಲ್ಲಾಗ್ ಒಂದ್ Love Story’ ಚಿತ್ರ ವಿಶೇಷ ಹಾಗು ವಿಭಿನ್ನ ಎನಿಸುತ್ತದೆ.
ಈ ಚಿತ್ರದ ಉದ್ದಕ್ಕೂ ಮಳೆ ಇದೆ, ಅವನ ಹುಡುಗುತನವಿದೆ, ಅದರ ತುಂಟತನವಿದೆ, ಅವಳ ಹುಡುಗಾಟಿಕೆಯಿದೆ, ಭಗ್ನ ಪ್ರೇಮವಿದೆ, ಬಲು ಅಪರೂಪವೆನಿಸುವ ಕ್ಲೈಮಾಕ್ಸ್ ಹಾಗು ಎಲ್ಲಕ್ಕೊ ಮಿಗಿಲಾಗಿ ಅಪ್ಪಟ ಮನೋರಂಜನೆಯಿದೆ. ಬಹುಶಃ ನನ್ನಂಥ ಪ್ರೇಕ್ಷಕನಿಗೆ ಚಿತ್ರದೆಡೆಗಿನ ಮೊದಲ ಸೆಳೆತ ಶುರುವಾದದ್ದು ಈ ಚಿತ್ರದ ಟ್ರೈಲರನ್ನು ನಿರೂಪಿಸಿದ ರೀತಿ!
“ಮಾಡಿದರೇನು ಬಂತು ಕೇವಲ ಟ್ರೈಲರ್ ತನ್ನ ಮೋಡಿ…
ನಿಮ್ಮ ಜೋಡಿಯೊಡಗೂಡಿ ಬಂದು ಚಿತ್ರವನು ನೋಡಿ..
ಬೇಡ ಬಿಡಿ ನಿಮಗೆ ಯಾರದೇ ಉಸಾಬರಿ,
ಏಕೆಂದರೆ, ಇದು ಸಿಂಪಲ್ಲಾಗ್ ಒಂದ್ Love story…”
ಹಾಗೆ ನೋಡಿದರೆ, ಆ ಟ್ರೈಲರನ್ನು ಹೇಳುವ ವಿಧದಲ್ಲೇ ಹೊಸತನವಿದೆ. ಇಂಥ ಹೊಸತನದ ಸ್ಪರ್ಶ ಚಿತ್ರದ ಪ್ರತಿ ಫ್ರೇಮಿನುದ್ದಕ್ಕೂ ಕಾಣಸಿಗುತ್ತದೆ. ಕಥೆ, ಕಥಾ ನಾಯಕನ ಪ್ರೀತಿಯ ಹುಡುಕಾಟದೊಂದಿಗೆ ಶುರುವಾಗುತ್ತದೆ. ಒಂದು ರೀತಿಯಲಿ ಅದು ಜೀವದ ಸಂಗಾತಿಯ ಹುಡುಕಾಟ. ಹುಡುಕಾಟವೆಂದರೆ ಸುಮ್ಮನೆ ಮಾತೆ, ಅಲ್ಲೊಂದು ಸತ್ವ ಪರೀಕ್ಷೆ, ಪ್ರೀತಿಯ ಸಾಚಾತನ ಹಾಗು ರುಜುವಾತು! ಇವನು ಮಾತುಗಾರ, ಅವಳೇನು ಕಮ್ಮೀನ, ಆಕೆಯೂ ಭಲೇ ಮಾತುಗಾತಿ… ಮಾತಿದ್ದ ಮೇಲೆ ಮೌನ ಹಾಗು ಮಳೆ – ಸೂಚ್ಯ! ಮಳೆ ಬಿದ್ದ ಮನಸಲಿ ಖುದ್ದು ಸೋನು ನಿಗಮ್- ಹಾಡಬೇಕು. ಒಂದೆಡೆ, ಕಥಾ ನಾಯಕ ಹಾಗು ನಾಯಕಿ ಇಬ್ಬರೂ ಭಗ್ನ ಹೃದಯಿಗಳೇ. ಇದು ಅವರಿಬ್ಬರಿಗೂ ಒಂದು ಸ್ಥಿರತೆ ತಂದು ಕೊಟ್ಟಿರುತ್ತದಾ , ಅದಕ್ಕೆ ಉತ್ತರವಿಲ್ಲ. ಆದರೆ ಅವರ ಅಭಿನಯದಲ್ಲಿ ಬಲು ಸ್ಥಿರತೆಯಿದೆ. ಕಥೆ ಏನೇ ಇರಲಿ, ಚಿತ್ರ ರಂಜಿತವೆನಿಸುವುದು ಅದರ ನಿರೂಪಣ ಶೈಲಿಯಲ್ಲಿ, ಪಕ್ಕದಲಿ ಕುಳಿತು ಸಂಭಾಷಿಸುವಂತೆ ತೋರುವ ಮಾತುಗಳಲಿ, ಅದರ ರುಚಿಕಟ್ಟುತನದಲ್ಲಿ ಹಾಗು ಅಚ್ಚುಕಟ್ಟುತನದಲ್ಲಿ. ಸಂಭಾಷಣೆಗಳಲ್ಲಿ ಹೋಲಿಕೆಗಳಿವೆ, ಅಪೇಕ್ಷಿಸಲಾಗದ, ಉಪೇಕ್ಷಿಸಲಾಗದ ಹಾಗು ಚಿಂತನೆಗೆ ದೂಡುವ ಮಾತುಗಳಿವೆ. ಬಹುಶಃ, ಕೇವಲ ಮಾತನ್ನು, ಸಂಭಾಷಣೆಯನ್ನು ಇಷ್ಟು ಸಶಕ್ತವಾಗಿ ಉಪಯೋಗಿಸಿಕೊಂಡ ನಿರ್ದೇಶಕರಲ್ಲಿ ಯೋಗರಾಜ್ ಭಟ್ಟರನ್ನು ಬಿಟ್ಟರೆ ಈ ಚಿತ್ರದ ನಿರ್ದೇಶಕ ಸುನಿಲ್ ಕುಮಾರ್ರಿಗೆ ಶಹಬಾಸ್ಗಿರಿ ನೀಡಬೇಕು.
ಚಿತ್ರದ ನಾಯಕ ರಕ್ಷಿತ್ ಹಾಗು ನಾಯಕಿ ಶ್ವೇತ ಆ ಪಾತ್ರಗಳಿಗೆ ಅಪ್ಪ್ರಾಪ್ರಿಯೆಟ್ ಅನಿಸುತ್ತಾರೆ. ಸ್ವತಃ ಪಾತ್ರದಲ್ಲಿ ಹೆಚ್ಚು ಶೇಡ್ ಗಳಿಲ್ಲದ ಕಾರಣ, ಅವರ ಅಭಿನಯದ ಗಟ್ಟಿತನಕ್ಕೆ ಸೂಕ್ತ ಪಾತ್ರಗಳು ಮುಂದೊಮ್ಮೆ ಸಿಗಬಹುದು. But both of them look very promising. ಒಂದೆರಡು ನಿಮಿಷಗಳಿಗೆ ಬಂದು ಹೋಗುವ ಶ್ರೀನಗರ ಕಿಟ್ಟಿಯವರ ‘ ಬ್ರಾಂಡ್’ ಯಾವುದು ಎಂದೇ ತಿಳಿಯುವುದಿಲ್ಲ! ಆ ಮಟ್ಟಿಗೆ ಅವರು ಕ್ಷೇಮ. ಹಾಡುಗಳ ಕೋರಿಯೋಗ್ರಫಿಯಿಂದ ಹಿಡಿದು ಅದರ ಸಂಗೀತವನ್ನು ಗುನುಗುವಂತೆ ಹಾಗು ಹೊಸದಂತೆ ಮಾಡುವಲ್ಲಿ ಭರತ್ ಗೆಲ್ಲುತ್ತಾರೆ. ಬೆಳಗಿನಿಂದ ರಾತ್ರಿಯವರೆಗೂ ಮಾತನಾಡಿ, ಆಗಷ್ಟೇ ಇರುಳಲಿ ಹಸಿ-ಹಸಿ ಪ್ರೇಮಕ್ಕೆ ಬಿದ್ದು, ಬೆಳಗೆದ್ದು ನಾಯಕಿ- ನಾಯಕನಿಗೆ, ‘ ನಿಮ್ಮ್ ಹೆಸರೇನು…?’ ಎಂದರೆ ನಾಯಕನಿಗಿರಲಿ, ನನ್ನಂಥವನಿಗೆ ಹೇಗಾಗಬೇಡ. 50 First dates ಎಂಬ ಸಿನಿಮಾ ರಪ್ ಅಂತ ಪಾಸ್ ಆದ ಹಾಗಾಯ್ತು! ಕೇವಲ ಹತ್ತೋ-ಹನ್ನೆರಡೋ ಪಾತ್ರಗಳನ್ನಿಟ್ಟುಕೊಂಡು ಒಂದು ಸುಂದರವಾದ ಪ್ರೇಮ ಕಥೆ ಮಾಡಿದ್ದರೆ ಸುನಿ. ಬರುವ ಎಲ್ಲಾ ಕನ್ನಡ ಚಿತ್ರಗಳಿಗೂ ಮಾಡಿಕೊಡಲಿ ಇದು ಹೊಸ ದಾರಿ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ…
ಕೇವಲ ತಮಿಳು-ತೆಲುಗು ಚಿತ್ರಗಳಷ್ಟೇ ಆಗುತ್ತವೆ ಆಮದು,
ಕನ್ನಡ ಚಿತ್ರಗಳು ಕನ್ನಡದಲ್ಲೂ ಹೋಗದು ಅನ್ನುವ ಮಾತು ಹಳೆಯದು,
ಬರೆಯುತ್ತಿವೆ ಕನ್ನಡ ಚಿತ್ರಗಳು ತನ್ನ ಹಿಸ್ಟರಿ,
ನೋಡಲೇ ಬೇಕೊಮ್ಮೆ, ಸಿಂಪಲ್ಲಾಗ್ ಒಂದ್ Love story…!!
 

‍ಲೇಖಕರು avadhi

11 March, 2013

1 Comment

  1. Ramya

    Howdu, Ninna vimarshe ishtaa aaytu. Movie noo ishta aaytu.
    -Ramya

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading